ಇಮಿಟೇಷನ್ ಫ್ಲ್ಯಾನಲ್-
ಉಣ್ಣೆ (ಫ್ಲ್ಯಾನಲ್) ನೇಯ್ಗೆಯ ಒಪ್ಪವನ್ನು ಅಣಕುಮಾಡುವ ಹತ್ತಿನೂಲಿನ ಬಟ್ಟೆ(ಫ್ಲ್ಯಾನೆಲೆಟ್). ಇದನ್ನು ವಿಶೇಷವಾಗಿ ಸಾದಾ ಮತ್ತು ಕೆಲವೊಮ್ಮೆ 2/2ರ ಮೊಲೆ ನೇಯ್ಗೆ ಕ್ರಮದಿಂದ ನೇಯುತ್ತಾರೆ. ನೂಲಿನ ಎಳೆಗಳ ಕೂಳೆಗಳು ಎದ್ದಿರುವ ಮೇಲ್ಮೈ ಉಳ್ಳಂತೆ (ಫೈಬಸ್ ಸರ್ಫೇಸ್) ಕಾಣಲು ಈ ಬಟ್ಟಿಯನ್ನು ಪರಿಣಮಿಸುವ ಪೂರ್ಣೀಕರಣ ಕ್ರಿಯೆಗೆ ಒಳಪಡಿಸಿದಾಗ ಇದರಿಂದ ಉಣ್ಣೆವಸ್ತ್ರದ ಒಪ್ಪ (ಫಿನಿಷ್)ಬರುತ್ತದೆ, ಈ ವಿಧವಾದ ಮೇಲ್ಮೈಯನ್ನು ಮೃದುವಾಗಿ ನೂತ ಹಾಗೂ ದಪ್ಪವಾದ ಹೊಕ್ಕು ಎಳೆಗಳಿಂದಲೇ ಏರ್ಪಡಿಸುತ್ತಾರೆ. ಇದರ ದಾರವನ್ನು ಭಾರತದಲ್ಲಿ ಬೆಳೆವ ಅಥವಾ ತತ್ಸಮವಾದ ಉತ್ತಮವಾದ ಕಿರಿ ಎಳೆಯ ಹತ್ತಿಯಿಂದ ನೂತಿರುತ್ತಾರೆ. ಈ ವಿಧವಾದ ದಪ್ಪನೆಯ ಮೃದುವಾದ ದಾರವೇ ಬಟ್ಟೆಯ ಮೇಲ್ಮೈಯಲ್ಲಿ ನೂಲಿನ ಎಳೆಗಳನ್ನು ಎತ್ತಲು ಸಹಕಾರಿಯಾಗುತ್ತದೆ. ವಾಸ್ತವಿಕವಾಗಿ ಬಿಗಿಯಾಗಿ ನೂತದಾರಗಳನ್ನು ಉತ್ತಮತರನೇಯ್ಗೆ ಬಟ್ಟೆಯನ್ನು ನೇಯಲು ಉಪಯೋಗಿಸುತ್ತಾರೆ. ಅಲ್ಲದೆ ನೇಯ್ಗೆ ಕಾಣದಿರುವಂತಿರುವ ಸಂಯೋಜನೆಗೆ (ಸ್ಟ್ರಕ್ಚರ್‍ಲೆಸ್ ಟೆಕ್ಸ್ಚರ್) ಹೊಕ್ಕುದಾರವನ್ನು ಹಾಸಿನ ದಿಶೆಯಲ್ಲಿಯೇ ಹುರಿಮಾಡಿರುತ್ತಾರೆ. ಪೂರಾ ಬಟ್ಟೆ ನೇಯ್ದ ಅನಂತರ ಬಟ್ಟೆಯನ್ನು ಕುದಿಸಿ, ಚಿಲುಮೆ ಮಾಡುತ್ತಾರೆ; ಇಲ್ಲವೇ ಬಣ್ಣಹಾಕುತ್ತಾರೆ. ಬಟ್ಟೆಗಳನ್ನು ಬಣ್ಣಬಣ್ಣದ ಗೆರೆ ಅಥವಾ ಪಟ್ಟಿಗಳಿರುವಂತೆ ನೇಯುತ್ತಾರೆ. ಕೆಲವೊಮ್ಮೆ ಮುದ್ರಿತದಾರಗಳನ್ನು ಉಪಯೋಗಿಸುತ್ತಾರೆ ಮತ್ತೆ ಕೆಲವೊಮ್ಮೆ ಬಟ್ಟೆಯ ಮೇಲೆಯೇ ಮುದ್ರಿಸುವುದುಂಟು. ಮುದ್ರಿತ ಫ್ಲ್ಯಾನೆಲೆಟ್‍ನ ಹೆಸರು ವೆಲೊಸೆಟ್. ಸಾದಾನೇಯ್ಗೆಯ ಬಟ್ಟೆಯನ್ನು 24ರ ಹಾಸು, 12ರ ಹೊಕ್ಕು ಮತ್ತು ಅಂಗುಲಕ್ಕೆ 50 ಹಾಸುದಾರಗಳು, ಅಂಗುಲಕ್ಕೆ 48 ಹೊಕ್ಕುದಾರಗಳು ಇರುವಂತೆ ನೇಯುತ್ತಾರೆ. ಫ್ಲ್ಯಾನೆಲೆಟ್ ರೂಪದ ಒಪ್ಪವನ್ನು ಷರಾಯಿ ಬಟ್ಟೆಗಳು, ಹೊದಿಕೆಗಳು, ಕಂಬಳಿಗಳು, ಮೊದಲಾದ ಬಹು ವಿಧವಾದ ಬಟ್ಟೆಗಳಲ್ಲಿ ಒಂದು ಅಥವಾ ಎರಡು ಮುಖಗಳಲ್ಲೂ ಬೇಕಾದಂತೆ (ಎಳೆಗಳು ಎದ್ದಿರುವಂತೆ) ನೇಯುತ್ತಾರೆ.				
 (ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ